ತ್ರಿಪಿಟಕಗಳು -
	ಬೌದ್ಧ ಆಗಮ ಸಾಹಿತ್ಯವನ್ನು ತ್ರಿಪಿಟಕ ಎನ್ನುತ್ತಾರೆ. ಈ ತ್ರಿಪಿಟಕ ಸಾಹಿತ್ಯ ವಿನಯಪಿಟಕ, ಸುತ್ತಪಿಟಕ ಮತ್ತು ಅಭಿದಮ್ಮ ಪಿಟಕ ಎಂಬ ಮೂರು ಪಿಟಕಗಳನ್ನೊಳಗೊಂಡಿದೆ.

	ಬುದ್ಧ ಮಾಡಿದ ಉಪದೇಶಪರ ಪ್ರವಚನಗಳನ್ನು ತ್ರಿಪಿಟಕಗಳಲ್ಲಿ ಕಾಣಬಹುದು. ಈ ಗ್ರಂಥಗಳನ್ನು ಕೂಲಂಕಷವಾಗಿ ಅವಲೋಕಿಸಿದರೆ ಬುದ್ಧ ಯಾವ ಪ್ರಸಂಗಗಳಲ್ಲಿ ಯಾವ ಸ್ಥಳಗಳಲ್ಲಿ ಧರ್ಮೋಪದೇಶ ಮಾಡಿದನೆಂಬುದು ಖಚಿತವಾಗುತ್ತದೆ. ನಾಲ್ಕು ಆರ್ಯಸತ್ಯಗಳು, ಎಂಟು ಆದರ್ಶ ಮಾರ್ಗಗಳು ಬುದ್ಧನ ಧರ್ಮೋಪದೇಶದ ಮುಖ್ಯಾಂಶಗಳಾಗಿವೆ. ಮಹಾಪರಿಣಿಬ್ಬಾಣ ಸುತ್ತದಲ್ಲಿ ಅವನು ತನ್ನ ಕೊನೆಗಾಲದಲ್ಲಿ ಮಾಡಿದ ಉಪದೇಶವಿದ್ದರೆ, ಅವನೇ ಹೇಳಿದನೆನ್ನುವ ಮಾತುಗಳು ಧಮ್ಮಪದ, ಉದಾನ ಇತಿವುತ್ತಕ, ನೇಪಾಳದ ಸಂಸ್ಕøತ ಗ್ರಂಥಗಳು ಟಿಬೆಟನ್ ಮತ್ತು ಚೀನೀ ಭಾಷೆಗಳಲ್ಲಿ ಅನುವಾದಿತ ಗ್ರಂಥಗಳಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರಾಚೀನ ಬೌದ್ಧ ಸಾಹಿತ್ಯದಲ್ಲಿ ಸಾಮಾನ್ಯವಾಗಿ ಬುದ್ಧನ ಉಪದೇಶಗಳ ಸಂಗ್ರಹ, ಪ್ರಶ್ನೋತ್ತರಗಳ ಸಂಗ್ರಹ, ಹಾಡುಗಳ ಸಂಗ್ರಹ, ಕಥೆಗಳ ಸಂಗ್ರಹ, ಧಾರ್ಮಿಕ ನಿಯಮಾವಳಿಗಳು-ಮೊದಲಾದವನ್ನು ಕಾಣಬಹುದು. ಹೀಗೆ ತ್ರಿಪಿಟಕಗಳು ಇಂಥ ಸಂಗ್ರಹಗಳ ಒಂದು ಮಹಾ ಸಂಗ್ರಹ. ಬುದ್ಧನ ನಿರ್ವಾಣದ ಅನಂತರ ರಾಜಗೃಹದಲ್ಲಿ ಬೌದ್ಧ ಭಿಕ್ಷುಗಳು ಒಂದೆಡೆ ಸೇರಿ ಬುದ್ಧ ಮಾಡಿದ ಎಲ್ಲ ಬಗೆಯ ಉಪದೇಶಗಳಿಗೆ ಆಗಮದ ಸ್ವರೂಪವನ್ನು ಕೊಟ್ಟರೆಂಬ ಐತಿಹ್ಯವುಂಟು. ಇದನ್ನು ಬೌದ್ಧ ಮುನಿಗಳ ಸಂಘದ ಮೊದಲನೆಯ ಸಭೆಯೆಂದು ಕರೆಯುತ್ತಾರೆ. ಇದರ ಬಗ್ಗೆ ಅನೇಕ ವಾದವಿವಾದಗಳುಂಟು. ಅವನ್ನು ಕುರಿತು ಚರ್ಚೆ ಮಾಡುವುದು ಇಲ್ಲಿ ಅನುಚಿತ. ಬೌದ್ಧ ಸಾಹಿತ್ಯದಲ್ಲಿ ತ್ರಿಪಿಟಕಗಳ ಮಹತ್ತ್ವವನ್ನು ತಿಳಿದುಕೊಳ್ಳುವುದು ಮಾತ್ರ ಇಲ್ಲಿನ ಉದ್ದೇಶ. ಈ ದೃಷ್ಟಿಯಿಂದ ತ್ರಿಪಿಟಕಗಳ ವಿಷಯ ಬಹಳ ಮಹತ್ತ್ವದ್ದು. ಬೌದ್ಧ ಸಂಘದ ಎರಡನೆಯ ಸಭೆ ವೈಶಾಲಿಯಲ್ಲಿ ಕೂಡಿತ್ತೆಂದು ಹೇಳುವುದುಂಟು. ಈ ಸಭೆಯಲ್ಲಿ ಹತ್ತು ಪಾಶಂಡಿಗಳನ್ನು ಕೈಬಿಡಲಾಯಿತೆಂದು ಹೇಳುತ್ತಾರೆ. ಹೀಗೆ ಬೌದ್ಧರ ಮೂಲ ಸಂಘ ಒಡೆಯಿತು. ಮುನಿಜೀವನವನ್ನು ಕುರಿತು ಮೂಲಭೂತವಾದ ನಿಯಮಗಳು ನಿರ್ಣಯಿತವಾದವು. ವಿನಯಪಿಟಕದಲ್ಲಿ ಇವನ್ನು ಕ್ರೋಡೀಕರಿಸಲಾಗಿದೆ. ಸಿಂಹಳ ದ್ವೀಪದ ವರದಿಗನುಸಾರ, ಸಮ್ರಾಟ ಅಶೋಕನ ಕಾಲದಲ್ಲಿ ಮೂರನೆಯ ಸಭೆ ಸೇರಿ, ಬೌದ್ಧಾಗಮವನ್ನು ಸರಿಪಡಿಸಲಾಯಿತೆಂದು ತಿಳಿದುಬರುತ್ತದೆ. ಈ ಕಾಲಕ್ಕೆ ಬೌದ್ಧ ಮೂಲ ಸಂಘದಲ್ಲಿ ಅನೇಕ ಒಳಪಂಗಡಗಳು ಉದ್ಭವಿಸಿದ್ದುವು. ಇಂಥ 18 ಶಾಖೆಗಳ ಉಲ್ಲೇಖವಿದೆ. ಸಮ್ರಾಟ ಅಶೋಕ ಬೌದ್ಧ ಧರ್ಮದ ಅನುಯಾಯಿಯೂ ಪೋಷಕನೂ ಆಗಿದ್ದರೂ ಆತನ ಶಾಸನಗಳಲ್ಲಿ ಎಲ್ಲಿಯೂ ಯಾವ ಸಭೆಯ ಉಲ್ಲೇಖವೂ ಕಂಡುಬರುವುದಿಲ್ಲ. ಈತನ ಕಾಲದಲ್ಲಿ ಬೌದ್ಧ ಸಂಘದ ಧರ್ಮಗುರುವಾದ ತಿಸ್ಸಮೊಗ್ಗಲಿಪುತ್ತ ಬುದ್ಧನ ನಿರ್ವಾಣದ 236ನೆಯ ವರ್ಷದಲ್ಲಿ ಪಾಟಲೀಪುತ್ರ ನಗರದಲ್ಲಿ ಬೌದ್ಧ ಮುನಿಗಳ ಸಭೆಯನ್ನು ಕರೆದು, ಅದರಲ್ಲಿ ತಮ್ಮ ಆಗಮವನ್ನು ರಚಿಸಿದನೆಂದು ಹೇಳುತ್ತಾರೆ. ವಿಭಜ್ಜವಾದಿಗಳು ಥೇರವಾದವೆಂಬ ಆಗಮವನ್ನು ರಚಿಸಿದರು. ತಿಸ್ಸನಾದರೋ ಕಥಾವಸ್ತುವನ್ನು ರಚಿಸಿದನೆಂದು ಬೌದ್ಧ ಸಂಪ್ರದಾಯ ಅಭಿಪ್ರಾಯಪಡುತ್ತದೆ. ಇದು ಬೌದ್ಧೇತರ ಪಂಥಗಳ ತತ್ತ್ವಗಳನ್ನು ಖಂಡಿಸುವ ಗ್ರಂಥ.

	ಬೌದ್ಧ ಸಂಘನಾಯಕನಾದ ತಿಸ್ಸ ಭಾರತದ ಉತ್ತರ ಮತ್ತು ದಕ್ಷಿಣಕ್ಕೆ ತನ್ನ ದೂತರನ್ನು ಕಳಿಸಿದ; ಪರದೇಶಗಳಿಗೆ ಬೌದ್ಧ ಧರ್ಮ ಪ್ರಚಾರಕ್ಕೆ ಹಾದಿ ಮಾಡಿ ಕೊಟ್ಟ. ಅಶೋಕನ ಚಿಕ್ಕ ತಮ್ಮನೂ ತಿಸ್ಸನ ಶಿಷ್ಯನೂ ಆದ ಮಹೀಂದ್ರ ಸಿಂಹಳ ದ್ವೀಪಕ್ಕೆ ಬೌದ್ಧ ಧರ್ಮವನ್ನೂ ಬೌದ್ಧ ಗ್ರಂಥಗಳನ್ನೂ ತೆಗೆದುಕೊಂಡು ಹೋದನೆಂದು ಸಂಪ್ರದಾಯದಿಂದ ತಿಳಿಯುತ್ತದೆ. ಕ್ರಿ.ಪೂ. ಒಂದನೆಯ ಶತಮಾನದಲ್ಲಿ ಸಿಂಹಳ ದೊರೆ ವಟ್ಟಗಾಮನಿ ಈ ಗ್ರಂಥಗಳನ್ನು ಬರೆಯಿಸಿದನೆಂದು ಚೀನದ ಪ್ರವಾಸಿಯಾದ ಪಾಹಿಯಾನನ ಬರೆಹಗಳಿಂದ ಗೊತ್ತಾಗುತ್ತದೆ. ಹೀಗೆ ಬೌದ್ಧ ಆಗಮದ ರಚನೆಯ ಚರಿತ್ರೆಯನ್ನು ಸಂಗ್ರಹವಾಗಿ ಹೇಳಬಹುದು.

	ವಿನಯಪಿಟಕ : ಪಾಟಿಮೋಕ್ಖ, ವಿಭಂಗ, ಖಂದಕ, ಪರಿವಾರ ಎಂಬ ವಿಭಾಗಗಳನ್ನೊಳಗೊಂಡ ಇದರಲ್ಲಿ ಬೌದ್ಧ ಧರ್ಮದ ನಿಯಮಗಳಿವೆ. ಈ ನಿಯಮಗಳನ್ನು ಸಂಗ್ರಹವಾಗಿ ವಿನಯವೆಂದು ಕರೆದಿದ್ದಾರೆ. ಬೌದ್ಧ ಯತಿಗಳಿಗೆ, ಧರ್ಮ ತತ್ತ್ವಗಳಿಗೆ ಮತ್ತು ಸಾಧ್ವಿನಿಯರ ಜೀವನಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳೂ ಈ ವಿಭಾಗದಲ್ಲಿ ಸಮಾವೇಶಗೊಂಡಿವೆ. ಬೌದ್ಧರು ಇದನ್ನು ಸರ್ವಶ್ರೇಷ್ಠವಾದುದೆಂದು ಬಗೆಯುತ್ತಾರೆ. ಇದರಲ್ಲಿ ಮಹಾವಿಭಂಗ, ಭಿಕ್ಕುಣೀವಿಭಂಗ, ಮಹಾವಗ್ಗ, ಚುಲ್ಲವಗ್ಗ ಮತ್ತು ಪರಿವಾರ ಪಾಠ-ಎಂಬ ಗ್ರಂಥಗಳು ಒಳವು. ವಿನಯಪಿಟಕದ ಮುಖ್ಯ ಭಾಗವೆನಿಸುವ ಪಾಟಿಮೋಕ್ಖದಲ್ಲಿ ಯತಿಗಳ ಅತಿಚಾರ ಮತ್ತು ಅವುಗಳ ಪ್ರಾಯಶ್ಚಿತ್ತಗಳನ್ನು ಕುರಿತು ವಿಶ್ಲೇಷಣ ಮಾಡಲಾಗಿದೆ. ಬುದ್ಧ ತನ್ನ ಯತಿಗಳು ಸಿಕ್ಖಾಪದ ಮತ್ತು ಪಾಟಿಮೋಕ್ಖಗಳ ಮೇರೆಗೆ ಧರ್ಮಾಚರಣೆಯನ್ನು ಮಾಡಬೇಕೆಂದು ಹೇಳಿದ್ದ. ಮೊದಲನೆಯದರಲ್ಲಿ ಹತ್ತು ಆದೇಶಗಳನ್ನು ನೀಡಲಾಗಿದೆ. ಎರಡನೆಯದರಲ್ಲಿ ಒಟ್ಟು 152 ನಿಯಮಗಳನ್ನು ಹೇಳಲಾಗಿದೆ. ವಿನಯಪಿಟಕ ಸಿದ್ಧವಾಗುವಷ್ಟರಲ್ಲಿ ಇವುಗಳ ಸಂಖ್ಯೆ 227ಕ್ಕೇರಿತು. ಮಹಾವಗ್ಗದಲ್ಲಿ ವಿಶೇಷ ವಚನಗಳಿವೆ. ದೀಕ್ಷೆಯನ್ನು ತೆಗೆದುಕೊಳ್ಳುವ ಮೊದಲು ಪಾಲಿಸಬೇಕಾದ ನಿಯಮಗಳು, ಉಪೋಸಥ ಸಮಾರಂಭ, ಪವಾರಣಾ ಸಮಾರಂಭ ಮತ್ತು ಯತಿಗಳು ತಮ್ಮ ಉಪಕರಣಗಳನ್ನು ಬಳಸುವಲ್ಲಿನ ನಿಯಮಗಳು ಈ ಗ್ರಂಥದಲ್ಲಿವೆ. ಚುಲ್ಲವಗ್ಗದಲ್ಲಿ ಇವೇ ಸಂಗತಿಗಳನ್ನು ತುಸು ಶಿಥಿಲಗೊಳಿಸಿ ಹೇಳಲಾಗಿದೆ. ಇದರಲ್ಲಿ ಮುಖ್ಯವಾಗಿ ತಪಶ್ಚರ್ಯ, ಅತಿಚಾರ, ಪ್ರಾಯಶ್ಚಿತ್ತ, ವಾದವಿವಾದ, ಯತಿಗಳ ದಿನಚರಿ ಆಶ್ರಮಗಳು, ನಿತ್ಯ ಕರ್ತವ್ಯ ಮತ್ತು ಪಾಟಿಮೋಕ್ಖ ಸಮಾರಂಭದಿಂದ ಯತಿಗಳನ್ನು ಹೊರಹಾಕುವ ನಿಯಮಗಳು-ಇತ್ಯಾದಿ ಸಂಗತಿಗಳ ವಿವರಣೆಯಿದೆ. ಇದರ 10ನೆಯ ವಿಭಾಗದಲ್ಲಿ ಸಾಧ್ವಿನಿಯರು ಪಾಲಿಸಬೇಕಾದ ನಿಯಮಗಳ ವರ್ಣನೆಯಿದೆ. 11 ಮತ್ತು 12ನೆಯ ವಿಭಾಗದಲ್ಲಿ ರಾಜಗೃಹ ಮತ್ತು ವೈಶಾಲಿಗಳಲ್ಲಿ ಕೂಡಿದ ಬೌದ್ಧ ಸಂಘಗಳ ಸಭೆಗಳ ಮಾಹಿತಿ ದೊರೆಯುತ್ತದೆ. ಅಲ್ಲದೆ ಬುದ್ಧ ತನ್ನ ಹುಟ್ಟೂರಿಗೆ ಹೋಗಿ ಮಗ ರಾಹುಲನಿಗೆ ದೀಕ್ಷೆಯನ್ನು ಕೊಟ್ಟ ಬಗ್ಗೆ ಹಾಗೂ ಅನಾಥಪಿಂಡಕ, ದೇವದತ್ತರ ಬಗ್ಗೆ ಕಥೆಗಳಿವೆ. ವಿನಯಪಿಟಕದ ಕೊನೆಯ ಗ್ರಂಥವೆಂದರೆ ಪರಿವಾರ. ಸಿಂಹಳದ ಸಾಧುವೊಬ್ಬ ಇದನ್ನು ರಚಿಸಿದ. ಆದುದರಿಂದ ಇದು ಬಹಳ ಇತ್ತೀಚಿನ ಕೃತಿ.

	ಸುತ್ತಪಿಟಕ : ದೀಘನಿಕಾಯ, ಮಜ್ಝಿಮ ನಿಕಾಯ, ಸಂಯುತ್ತ ನಿಕಾಯ, ಅಂಗುತ್ತರ ನಿಕಾಯ, ಖುದ್ದನಿಕಾಯ ಎಂಬ ಭಾಗಗಳನ್ನೊಳಗೊಂಡ ಇದರಲ್ಲಿ ಬೌದ್ಧ ಧರ್ಮದ ಬಗ್ಗೆ ಬುದ್ಧನ ಆರಂಭದ ಅನುಯಾಯಿಗಳ ಬಗ್ಗೆ ಎಲ್ಲ ಮಾಹಿತಿ ದೊರೆಯುತ್ತದೆ. ಇದರಲ್ಲಿ ಕೊನೆಯ ನಿಕಾಯದಲ್ಲಿ ಖುದ್ದಕಪಾಠ, ಧಮ್ಮಪದ, ಉದಾನ, ಇತಿವುತ್ತಕ, ಸುತ್ತನಿಪಾತ, ವಿಮಾನವತ್ಥು, ಪೇತವತ್ಥು, ಥೇರಗಾಥಾ, ಥೇರೀಗಾಥಾ, ಜಾತಕ, ನಿದ್ದೇಸ, ಪಟಿಸಂಭಿದಾಮಗ್ಗ, ಅಪದಾನ, ಬುದ್ಧವಂಸ ಮತ್ತು ಚರಿಯಾಪಿಟಕ ಗ್ರಂಥಗಳು ಸಮಾವೇಶಗೊಳ್ಳುತ್ತವೆ. ಮೊದಲಿನ ನಾಲ್ಕು ನಿಕಾಯಗಳಲ್ಲಿ ಸೂತ್ರಗಳಿವೆ. ಇವುಗಳಲ್ಲಿ ವಿಶೇಷವಾಗಿ ಬುದ್ಧನ ಸಂಭಾಷಣೆಗಳನ್ನು ಕಾಣಬಹುದು. ಇವು ಗದ್ಯದಲ್ಲಿದ್ದರೂ ಅಲ್ಲಲ್ಲಿ ಕೆಲವು ಪದ್ಯಗಳು ಕಾಣಿಸಿಕೊಳ್ಳುತ್ತವೆ.

	ಹೆಸರೇ ಸೂಚಿಸುವಂತೆ ದೀಘನಿಕಾಯವಲ್ಲಿ ದೀರ್ಘ ಪ್ರವಚನಗಳಿವೆ. ಇದರಲ್ಲಿ ಬಹು ದೀರ್ಘವಾದ 34 ಸೂತ್ರಗಳಿವೆ. ಒಂದೊಂದು ಸೂತ್ರ ಒಂದೊಂದು ಗ್ರಂಥವಾಗಬಲ್ಲದು. ಇದರಲ್ಲಿ ಮೂರು ಭಾಗಗಳಿದ್ದು, ಮೂರೂ ವಿಷಯ ನಿರೂಪಣೆಯ ದೃಷ್ಟಿಯಿಂದ ಭಿನ್ನವಾಗಿ ತೋರುತ್ತವೆ. ಈ ವಿಭಾಗಗಳ ಬಹು ಭಾಗ ಗದ್ಯದಲ್ಲಿದ್ದು ಅಲ್ಲಲ್ಲಿ ಪದ್ಯಗಳೂ ಕಂಡುಬರುತ್ತವೆ. ಮೊದಲನೆಯ ವಿಭಾಗದಲ್ಲಿ ಸಾಧುಸಾಧ್ವಿನಿಯರ ನೀತಿಯನ್ನು ಕುರಿತು ಹೇಳಿದ ಪ್ರಶ್ನೋತ್ತರಗಳಿವೆ. ವಿಶೇಷವಾಗಿ ಶೀಲ, ಸಮಾಧಿ ಮತ್ತು ಪ್ರಜ್ಞಾ-ಇವನ್ನು ಒತ್ತಿ ವಿವರಿಸಲಾಗಿದೆ. ಬುದ್ಧ ಹೇಳಿದ ನೀತಿ ತತ್ತ್ವಗಳು ಸಾಮಾನ್ಯವಾಗಿ ಇತರ ಮತಗಳ ನೀತಿ ತತ್ತ್ವಗಳನ್ನು ಖಂಡಿಸುವ ಉದ್ದೇಶದಿಂದ ಕೂಡಿದಂತೆ ತೋರುತ್ತವೆ. ಈ ದೃಷ್ಟಿಯಿಂದ ಬ್ರಹ್ಮಜಾಲಸುತ್ತ ಪ್ರಾಚೀನ ಭಾರತದ ಧರ್ಮಗಳ ಚಾರಿತ್ರಿಕ ದೃಷ್ಟಿಯಿಂದ ಬಹಳ ಮಹತ್ತ್ವದ್ದಾಗಿದೆ. ಇಲ್ಲಿ ಬುದ್ಧ ವೈದಿಕ ಯತಿಗಳ ಉಪದೇಶವನ್ನು ಎಚ್ಚರಿಕೆಯಿಂದ ಅವಲೋಕಿಸಬೇಕೆಂದು ತನ್ನ ಅನುಯಾಯಿಗಳಿಗೆ ಸೂಚನೆಯನ್ನಿತ್ತಿದ್ದಾನೆ. ಈ ಸೂತ್ರದಲ್ಲಿ ಬರುವ ವರ್ಣನೆಯಿಂದ ಬ್ರಾಹ್ಮಣರು ಮತ್ತು ಬ್ರಾಹ್ಮಣ ಯತಿಗಳು ಬಗೆಬಗೆಯ ಸುಖಸೌಲಭ್ಯಗಳನ್ನು ಸಂಪಾದಿಸುವುದರಲ್ಲಿಯೂ ಸಂಗೀತ, ನಾಟಕ, ನೃತ್ಯ, ವಾದ್ಯ ಮೊದಲಾದ ಮನೋರಂಜಕ ಕಾರ್ಯಕಲಾಪಗಳನ್ನು ಸಂದರ್ಶಿಸುವುದರಲ್ಲಿಯೂ ಯಜ್ಞ-ಯಾಗಾದಿಗಳನ್ನು ಮಾಡಿ ಹೊಟ್ಟೆ ಹೊರಕೊಳ್ಳುವುದರಲ್ಲಿಯೂ ಮಗ್ನರಾಗಿದ್ದರೆಂದು ತಿಳಿಯುತ್ತದೆ. ಮೀನುಗಾರ ಬಲೆಯನ್ನು ಬೀಸಿ ಎಲ್ಲ ತರದ ಮೀನುಗಳನ್ನು ಹಿಡಿಯುವಂತೆ ಬುದ್ಧ ಬ್ರಾಹ್ಮಣರ ತತ್ತ್ವಗಳನ್ನು ಖಂಡಿಸಿ, ಅವು ವಾಸ್ತವಿಕತೆಯಿಂದ ಬಹಳ ದೂರವಿರುತ್ತವೆ ಎಂಬುವನ್ನು ತೋರಿಸಿ, ಪಂಡಿತರನ್ನೂ ತತ್ತ್ವಜ್ಞಾನಿಗಳನ್ನೂ ತನ್ನ ಬಲೆಗೆ ಹಾಕಿಕೊಳ್ಳುವುದರಲ್ಲಿ ನಿಪುಣನಾಗಿದ್ದನೆಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಸಾಮನ್ನಫಲಸುತ್ತ ಶ್ರಾಮಣ್ಯದ ಫಲವನ್ನು ಕುರಿತು ಹೇಳುವ ಸೂತ್ರವಾಗಿದೆ. ಭಾರತೀಯ ಜಾತಿ ಪದ್ಧತಿಯ ಇತಿಹಾಸ ಮತ್ತು ಅದರ ಬಗ್ಗೆ ಬುದ್ಧ ತಾಳಿದ ಅಭಿಪ್ರಾಯಗಳ ದೃಷ್ಟಿಯಿಂದ ಅಂಬಟ್ಟ. ಸುತ್ತ ಬಹಳ ಮಹತ್ತ್ವದ್ದಾಗಿದೆ. ಹೀಗೆಯೇ ಇನ್ನುಳಿದ ಸೂತ್ರಗಳು ಒಂದಿಲ್ಲೊಂದು ರೀತಿಯಿಂದ ತತ್ಕಾಲೀನ ವೈದಿಕ ಧರ್ಮ ಮತ್ತು ಸಮಾಜದ ಲೋಪದೋಷಗಳನ್ನು ಪ್ರತಿಬಿಂಬಿಸುತ್ತವೆ. ಹದಿನಾರನೆಯ ಸೂತ್ರವಾದ ಮಹಾಪರಿಣಿಬ್ಬಾಣಸುತ್ತದಲ್ಲಿ ಬುದ್ಧನ ಮಹಾನಿರ್ವಾಣದ ಮೇಲಿನ ಪ್ರವಚನವಿದೆ.

	ಮಜ್ಝಿಮನಿಕಾಯದಲ್ಲಿ ಮಧ್ಯಮಗಾತ್ರದ 152 ಸಂಭಾಷಣೆಗಳಿವೆ. ಇವುಗಳಲ್ಲಿ ಬುದ್ಧ ಉಪದೇಶಿಸಿದ ಧರ್ಮ, ನಾಲ್ಕು ಆರ್ಯ ಸತ್ಯಗಳು, ಕರ್ಮ, ಕಷಾಯ, ಧ್ಯಾನ, ಜೀವಶ್ರದ್ಧೆ, ನಿರ್ವಾಣ ಮೊದಲಾದ ಸಂಗತಿಗಳು ಸೇರಿವೆ. ಇದರೊಳಗಿನ ಕೆಲವು ಸೂತ್ರಗಳು ಕೇವಲ ಕಥಾಮಯವಾಗಿವೆ. 86ನೆಯ ಸೂತ್ರ ಅಂಗುಲೀಮಾಲ (ನೋಡಿ- ಅಂಗುಲೀಮಾಲ) ಚೋರನ ಕಥೆಯನ್ನು ಹೇಳುತ್ತದೆ. 83ರಲ್ಲಿ ಮಖಾದೇವ ಅರಸನ ಕಥೆಯಿದ್ದು, ಕೇವಲ ಒಂದು ನರೆಗೂದಲನ್ನು ಕಂಡು ಅವನಲ್ಲಿ ವೈರಾಗ್ಯ ಉಂಟಾಗಿ ಸಂಸಾರವನ್ನು ಆತ ಹೇಗೆ ತ್ಯಜಿಸಿದನೆಂಬುದನ್ನು ಸುಂದರವಾದ ಶೈಲಿಯಲ್ಲಿ ವರ್ಣಿಸಲಾಗಿದೆ. ಇವುಗಳಲ್ಲಿ ಸರ್ವಶ್ರೇಷ್ಠವಾದುದು ರಟ್ಠಪಾಲಸುತ್ತ. 116ರಲ್ಲಿ ಪ್ರತ್ಯೇಕ ಬುದ್ಧರ ಪಟ್ಟಿ ಸಿಗುತ್ತದೆ. ಇದರ ಸೂತ್ರಗಳಲ್ಲಿ ಕೇವಲ ಧಾರ್ಮಿಕ ಇತಿಗತಿಗಳನ್ನಷ್ಟೇ ಅಲ್ಲದೆ ತತ್ಕಾಲೀನ ಸಾಮಾಜಿಕ ಸಾಂಸ್ಕøತಿಕ ಚಿತ್ರಣವನ್ನೂ ಕಾಣಬಹುದು. ಇನ್ನುಳಿದ ಕೆಲವು ಸೂತ್ರಗಳನ್ನು ನೋಡಿದಾಗ, ಬುದ್ಧ ನಮಗೆ ಒಬ್ಬ ಸಾಮಾನ್ಯ ಮನುಷ್ಯನಂತೆ ಕಾಣುತ್ತಾನೆ. 26 ಮತ್ತು 36ನೆಯ ಸೂತ್ರಗಳಲ್ಲಿ ಬುದ್ಧನೇ ತನ್ನ ಆತ್ಮಚರಿತ್ರೆಯನ್ನು ಯಾವ ಅದ್ಭುತಗಳನ್ನೂ ಬಳಸದೆ ಸರಳವಾದ ಭಾಷೆಯಲ್ಲಿ ಹೇಳಿದ್ದಾನೆ.

	ಮೂರನೆಯ ಸಂಗ್ರಹವಾದ ಸಂಯುತ್ತನಿಕಾಯದಲ್ಲಿ ಸೂತ್ರಗಳ ಗುಂಪುಗಳನ್ನು ಕಾಣಬಹುದು. ಇವುಗಳಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಯಾವ ವರ್ಗೀಕರಣವಿಲ್ಲದಿದ್ದರೂ ಇಡೀ ಸಂಗ್ರಹವನ್ನು ಓದಿದಾಗ ಒಂದೊಂದು ವಿಷಯಕ್ಕೆ ಸಂಬಂಧಿಸಿದ ಸೂತ್ರಗಳು ಹೇಗೆ ಒಂದೇ ಕಡೆಯಲ್ಲಿ ಬಂದಿವೆ ಎಂಬುದು ತಿಳಿಯುತ್ತದೆ. ಸ್ಥೂಲವಾಗಿ ದೇವತಾ-ಸಂಯುತ್ತ, ಮಾರಸಂಯುತ್ತ, ಭಿಕ್ಖುನೀ ಸಂಯುತ್ತ, ನಿದಾನ ಸಂಯುತ್ತ, ಅನಮತಗ್ಗ ಸಂಯುತ್ತ, ಕಸ್ಸಪ ಸಂಯುತ್ತ, ಸಾರೀಪುತ್ತ ಸಂಯುತ್ತ, ನಾಗ ಸಂಯುತ್ತ ಜ್ಞಾನ ಇಲ್ಲವೆ ಸಮಾಧಿ ಸಂಯುತ್ತ, ಮಾತುಗಾಮ ಸಂಯುತ್ತ ಮತ್ತು ಸಚ್ಚ ಸಂಯುತ್ತಗಳನ್ನು ಕಾಣಬಹುದು. ಮೊದಲನೆಯದರಲ್ಲಿ ದೇವತೆಗಳ ಸುಭಾಷಿತಗಳ ವರ್ಣನೆಯಿದ್ದರೆ ಕೊನೆಯದರಲ್ಲಿ ನಾಲ್ಕು ಆರ್ಯ ಸತ್ಯಗಳ ವಿವರಣೆಯಿದೆ. ಈ ನಾಲ್ಕು ಸತ್ಯಗಳ ಬಲದಿಂದ ಬುದ್ಧ ಧರ್ಮಚಕ್ರವನ್ನು ಹೇಗೆ ಪ್ರವರ್ತಿಸಿದನೆಂದು ಹೇಳುವ ಧರ್ಮಚಕ್ಕಪವತ್ತನ ಸುತ್ತವನ್ನು ಇಲ್ಲಿ ಕಾಣಬಹುದು.

	ಅಂಗುತ್ತರನಿಕಾಯ ನಾಲ್ಕನೆಯ ಸಂಗ್ರಹ. ಬುದ್ಧನ ಉಪದೇಶಗಳನ್ನು ಏರಿಕೆಯ ಕ್ರಮದಲ್ಲಿ ಇಲ್ಲಿ ಕೊಡಲಾಗಿದೆ. ಒಟ್ಟು ಸೂತ್ರಗಳ ಸಂಖ್ಯೆ 2,308. ಇವನ್ನು ಹನ್ನೊಂದು ನಿಪಾತಗಳಲ್ಲಿ ವಿಭಾಗಿಸಲಾಗಿದೆ. ಈ ವಿಭಜನೆಯ ವೈಶಿಷ್ಟ್ಯವೆಂದರೆ ಮೊದಲನೆಯದರಲ್ಲಿ ಕೇವಲ ಒಂದೇ ವಸ್ತುವಿನ ವರ್ಣನೆಯಿದ್ದರೆ, ಎರಡನೆಯದರಲ್ಲಿ ಕೇವಲ ಎರಡೆರಡೇ ವಸ್ತುಗಳ ವರ್ಣನೆಯಿದೆ. ಉದಾಹರಣೆ ಮುನಿಗಳು ಎರಡೆರಡು ವಸ್ತುಗಳನ್ನು ತ್ಯಜಿಸಬೇಕು, ಎರಡು ಕಪ್ಪು ಮತ್ತು ಎರಡು ಹೊಳಪುಳ್ಳ ವಸ್ತುಗಳು, ಅರಣ್ಯದಲ್ಲಿ ವಾಸಿಸಲು ಎರಡು ಕಾರಣಗಳು, ಎರಡು ಬಗೆಯ ಬುದ್ಧರು ಇತ್ಯಾದಿ. ಮೂರನೆಯದರಲ್ಲಿ ಮೂರು ಬಗೆಯ ಸಾಧುಗಳು, ಮೂರು ಬಗೆಯ ದೇವದೂತರು, ಮೂರು ಬಗೆಯ ಮೌನ ಇತ್ಯಾದಿ ಬಂದಿವೆ. ಏಳನೆಯದರಲ್ಲಿ ಧ್ಯಾನಕ್ಕೆ ಅವಶ್ಯವಾಗಿರುವ ಏಳು ಸಂಗತಿಗಳು ಏಳು ಅದ್ಭುತಗಳು, ಏಳು ಬಗೆಯ ಮಡದಿಯರು ಇತ್ಯಾದಿ ಇವೆ. ಹೀಗೆಯೇ ಈ ಕ್ರಮಪದ್ಧತಿ ಮುಂದೆ ಸಾಗುತ್ತದೆ.

	ಐದನೆಯ ಸಂಗ್ರಹವಾದ ಖುದ್ದನಿಕಾಯದಲ್ಲಿ ಚಿಕ್ಕ ಚಿಕ್ಕ ವರ್ಣನೆಗಳಿವೆ. ಇವು ಕಥೆ, ಹಾಡು ಮತ್ತು ವಚನಗಳಿಂದ ಕೂಡಿವೆ. ಇದರಲ್ಲಿ ಖುದ್ದಕ ಪಾಠ, ಧಮ್ಮಪದ, ಉದಾನ, ಇತಿವುತ್ತಕ, ಸುತ್ತನಿಪಾತ, ವಿಮಾನವತ್ಥು, ಪೇತವತ್ಥು, ಥೇರಥೇರೀಗಾಥಾ, ಜಾತಕ, ನಿದ್ದೇಸ, ಪಟಿ ಸಂಭಿಧಾಮಗ್ಗ, ಬುದ್ಧವಂಸ, ಚರಿಯಾಪಿಟಕ ಎಂಬ ಭಾಗಗಳಿವೆ. ಆರಂಭದಲ್ಲಿ ಚಿಕ್ಕ ಸ್ತೋತ್ರ ರೂಪದ ಪದ್ಯಗಳಿವೆ. ಐದನೆಯ ಸೂತ್ರದಲ್ಲಿ ಬುದ್ಧನಿಗೆ ಯಾವವು ಉತ್ತಮ ಮಂಗಲಗಳೆನಿಸಿದುವು ಎಂಬುದರ ಬಗ್ಗೆ ಹೇಳಿದೆ. ತಂದೆತಾಯಿಗಳಿಗೆ ಗೌರವವನ್ನು ಕೊಡುವುದು, ಚಿಕ್ಕ ಮಕ್ಕಳನ್ನು ಪೋಷಿಸುವುದು, ದಾನ ಮಾಡುವುದು, ನೀತಿಯುತ ಜೀವನ ನಡೆಸುವುದು, ಸತ್ಕರ್ಮಗಳನ್ನು ಮಾಡುವುದು, ಪಾಪಕರ್ಮಗಳನ್ನು ಮಾಡದಿರುವುದು, ಮದವನ್ನು ಹೆಚ್ಚಿಸುವ ಪೇಯಗಳನ್ನು ಕುಡಿಯದೇ ಇರುವುದು, ಧಾರ್ಮಿಕ ಕಾರ್ಯಗಳನ್ನು ಅಲ್ಲಗಳೆಯದಿರುವುದು-ಉತ್ತಮ ಮಂಗಲಗಳೆನಿಸುವವು. ರತ್ನಸೂತ್ರದ ಮೇರೆಗೆ ಭೂತಪಿಶಾಚಿಗಳನ್ನೂ ರತ್ನತ್ರಯವನ್ನೂ ಆರಾಧಿಸಬೇಕು. ಮಿತ್ರಸೂತ್ರದಲ್ಲಿ ಎಲ್ಲ ಪ್ರಾಣಿಮಾತ್ರಗಳನ್ನೂ ಸ್ತುತಿಸಲಾಗಿದೆ.

	ಬೌದ್ಧ ಸಾಹಿತ್ಯದಲ್ಲಿ ಧಮ್ಮಪದ ಅತಿ ಪ್ರಸಿದ್ಧವಾದ ಗ್ರಂಥ. ದೇಶವಿದೇಶದ ವಿದ್ವಾಂಸರು ಈ ಗ್ರಂಥವನ್ನು ಕುರಿತು ಬಹಳ ಬರೆದಿದ್ದಾರೆ. ಯೂರೋಪಿನ ಎಲ್ಲ ಭಾಷೆಗಳಲ್ಲಿ ಇದು ಅನುವಾದಿತವಾಗಿದೆ. ಇದು ಬುದ್ಧ ಮಾಡಿದ ಧಾರ್ಮಿಕ ಉಪದೇಶದಿಂದ ತುಂಬಿದೆ. ಆರಂಭದಲ್ಲಿ ಇದು ಕೇವಲ ಪದ್ಯಮಯವಾಗಿತ್ತು. ಕಾಲಾಂತರದಲ್ಲಿ ಗದ್ಯರೂಪದ ಕೆಲವು ಆಖ್ಯಾನಕಗಳನ್ನು ಇವುಗಳಿಗೆ ಸೇರಿಸಲಾಯಿತು. ಸಂಗ್ರಹಕಾರ ಇದನ್ನು ವರ್ಗಗಳಾಗಿ ವಿಭಾಗಿಸಿದ್ದಾನೆ. ಈ ವರ್ಗಗಳು ವಿಷಯದ ದೃಷ್ಟಿಯಿಂದ ವೈವಿಧ್ಯಪೂರ್ಣವಾಗಿವೆ.

	ಇದರಂತೆಯೇ ಉದಾನ ಚಿಕ್ಕಚಿಕ್ಕ ವಾಕ್ಯಗಳ ಸಂಗ್ರಹವಾಗಿದೆ. ಇವನ್ನು ಬುದ್ಧನ ಚುಟಕಗಳೆಂದು ಕರೆಯಬಹುದು. ಎಂಟನೆಯ ವಿಭಾಗದಲ್ಲಿ ನಿರ್ವಾಣದ ನಿಜವಾದ ಅರ್ಥವನ್ನು ವಿವರಿಸಲಾಗಿದೆ.

	ಇತಿವುತ್ತಕದಲ್ಲಿ ಬುದ್ಧನು `ಹೀಗೆ ಹೇಳಿದನೆಂಬ 112 ಹೇಳಿಕೆಗಳು ಬಂದಿವೆ. ಇವು ಪದ್ಯಗದ್ಯ ಮಿಶ್ರಿತವಾಗಿವೆ.

	ಅಂತೆಯೇ ಸುತ್ತನಿಪಾತ ಪದ್ಯಮಯ ಸೂತ್ರಗಳ ಸಂಗ್ರಹ. ಇದರಲ್ಲಿನ ಉರಗವಗ್ಗ, ಚೂಲವಗ್ಗ, ಮಹಾವಗ್ಗ, ಅಟ್ಠಕವಗ್ಗಗಳಲ್ಲಿ ಒಟ್ಟು 54 ಪದ್ಯ ಪಾಠಗಳಿವೆ. ಐದನೆಯದಾದ ಪಾರಾಯಣವಗ್ಗ ದೀರ್ಘ ಕವನವಾಗಿದೆ. ಇದರಲ್ಲಿ 16 ಉಪವಿಭಾಗಗಳಿವೆ.

	ಧಮ್ಮಪದದ ತರುವಾಯ ಸುತ್ತ ನಿಪಾತವನ್ನು ಮಹತ್ತ್ವದ್ದೆಂದು ಎಲ್ಲರೂ ಬಗೆಯುತ್ತಾರೆ.

	ವಿಮಾನವತ್ಥು ಮತ್ತು ಪೇತವತ್ಥುಗಳು ಚಿಕ್ಕ ಗ್ರಂಥಗಳಾಗಿವೆ. ಮೊದಲನೆಯದರಲ್ಲಿ ದಿವ್ಯ ಅರಮನೆಗಳ ವರ್ಣನೆಯಿದ್ದರೆ ಎರಡನೆಯದರಲ್ಲಿ ಭೂತಗಳ ಕಥೆಗಳಿವೆ. ವಿಮಾನವತ್ಥುವಿನಲ್ಲಿ ಮೊಗ್ಗಲಾನ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುತ್ತ ದೇವತೆಯೊಬ್ಬ ತಾನು ಪೂರ್ವಜನ್ಮಗಳಲ್ಲಿ ಮಾಡಿದ ಪುಣ್ಯದ ಫಲವಾಗಿ ಸ್ವರ್ಗವನ್ನು ಪಡೆದನೆಂದು ಹೇಳಿದ ವರ್ಣನೆಯಿದೆ. ಅಂತೆಯೇ ಭೂತವೊಂದು ನಾರದನಿಗೆ ತನ್ನ ದುಃಖಮಯ ಜೀವನದ ಕಾರಣಗಳನ್ನು ಹೇಳುವ ಪ್ರಸಂಗ ಪೇತವತ್ಥುವಿನಲ್ಲಿ ಬಂದಿದೆ.

	ಥೇರಗಾಥಾ ಮತ್ತು ಥೇರೀಗಾಥಾಗಳು ಮಹಾಮುನಿ ಮತ್ತು ಮಹಾಸಾಧ್ವಿನಿಯರು ಹಾಡಿದ ಉಪದೇಶಪರ ಗಾಹೆಗಳಿಂದ ಕೂಡಿವೆ. ಮೊದಲನೆಯದರಲ್ಲಿ 1279 ಗಾಹೆಗಳುಳ್ಳ 107 ಕವನಗಳಿವೆ; ಎರಡನೆಯದರಲ್ಲಿ 522 ಗಾಹೆಗಳುಳ್ಳ 23 ಕವನಗಳಿವೆ. ಬೌದ್ಧ ಸಂಪ್ರದಾಯ ಈ ಗಾಹೆಗಳನ್ನು ಕೆಲವು ಥೇರ ಮತ್ತು ಥೇರಿಯರ ಹೆಸರಿಗೆ ಸೇರಿಸಿದೆ. ಧಮ್ಮಪಾಲ ಸುಮಾರು ಕ್ರಿ.ಶ. 5ನೆಯ ಶತಮಾನದಲ್ಲಿ ಇವುಗಳ ಮೇಲೆ ಟೀಕೆಯನ್ನು ಬರೆದನೆಂದು ಹೇಳಲಾಗುತ್ತದೆ. ಈ ಟೀಕೆಯಲ್ಲಿ ಮೂಲ ಗ್ರಂಥಗಳಲ್ಲಿ ಉಲ್ಲೇಖಿಸಿದ ಥೇರ-ಥೇರಿಯರ ಜೀವನ ಚರಿತೆಯನ್ನು ವರ್ಣಿಸುವ ಕಥೆಗಳಿವೆ. ಥೇರಗಾಥೆಗಳಲ್ಲಿ ನಿಸರ್ಗದ ವರ್ಣನೆ ಅಧಿಕವಾಗಿದ್ದರೆ ಥೇರೀಗಾಥೆಗಳಲ್ಲಿ ಜೀವನದ ವರ್ಣನೆ ಹೆಚ್ಚಾಗಿದೆ. ಇಲ್ಲಿನ ಗಾಹೆಗಳು ಸಾಹಿತ್ಯಿಕ ದೃಷ್ಟಿಯಿಂದ ಋಗ್ವೇದದಿಂದ ಹಿಡಿದು ಕಾಳಿದಾಸ ಮತ್ತು ಅಮರುಗಳ ವರೆಗಿನ ಮುಕ್ತಗಳಿಗೆ ಸರಿಸಮಾನವೆನಿಸುತ್ತವೆ. ಥೇರೀಗಾಥಾದಲ್ಲಿ ಪ್ರಾಚೀನ ಭಾರತದ ಸ್ತ್ರೀಜೀವನದ ಚಿತ್ರ ಪ್ರತಿಬಂಬಿತವಾಗಿದೆ. ಸಮಾಜದಲ್ಲಿ ಅಂದು ಸ್ತ್ರೀಯರಿಗೆ ಎಂಥ ಸ್ಥಾನಮಾನಗಳಿದ್ದವು ಎಂಬುದನ್ನು ಈ ಗ್ರಂಥದಿಂದ ತಿಳಿದುಕೊಳ್ಳಬಹುದು. ಜಾತಕಗಳಲ್ಲಿ ಬುದ್ಧನ ಪೂರ್ವಜನ್ಮದ ಜೀವನವನ್ನು ವರ್ಣಿಸುವ ಕಥೆಗಳಿವೆ. ಈ ಕಥೆಗಳಲ್ಲಿ ದಂತಕಥೆಗಳು, ಅದ್ಭುತ ಕಥೆಗಳು, ಧರ್ಮಕಥೆಗಳು, ನೀತಿಕಥೆಗಳು, ವಚನಗಳು, ಪವಿತ್ರ ಪುರಾಣ ಕಥೆಗಳು ಸೇರುತ್ತವೆ. ಪಂಚತಂತ್ರದೊಳಗಿನ ಕಥೆಗಳಂತಿವೆ, ಇಲ್ಲಿನ ಕಥೆಗಳು.

	ನಿದ್ದೇಸ ಒಂದು ಟೀಕಾತ್ಮಕ ಗ್ರಂಥ. ನಿದ್ದೇಸವೆಂದರೆ ವಿವರಣೆ ಇಲ್ಲವೆ ಸೃಷ್ಟೀಕರಣ. ಇದರಲ್ಲಿ ಮಹಾನಿದ್ದೇಸ ಮತ್ತು ಚುಲ್ಲನಿದ್ದೇಸ-ಹೀಗೆ ಎರಡು ಪ್ರಕಾರಗಳಿವೆ. ಮೊದಲನೆಯದು ಅಟ್ಠಕವಗ್ಗವನ್ನೂ ಎರಡನೆಯದು ಖಗ್ಗವಿಸಾನಸುತ್ತವನ್ನೂ ವಿವರಿಸುತ್ತವೆ.

	ಪಟಸಂಭಿದಾಮಗ್ಗದಲ್ಲಿ ಮೂರು ದೀರ್ಘವಾದ ಭಾಗಗಳಿದ್ದು ಪ್ರತಿಯೊಂದು ಭಾಗದಲ್ಲಿ ಹತ್ತು ಚಿಕ್ಕ ಗ್ರಂಥಗಳಿವೆ. ಇವು ಬೌದ್ಧಮತದ ತತ್ತ್ವಗಳನ್ನು ವಿಶದೀಕರಿಸುತ್ತವೆ. ಅಪದಾನವೆಂಬುದರಲ್ಲಿ ವೀರಕಾರ್ಯಗಳನ್ನು ವರ್ಣಿಸಲಾಗಿದೆ. ಜಾತಕ ಕಥೆಗಳಂತೆ ಇಲ್ಲಿಯೂ ಶೂರ ಕಾರ್ಯಗಳನ್ನು ಉದಾಹರಿಸುವ ಕಥೆಗಳಿವೆ. ಇವೆಲ್ಲ ಪದ್ಯಮಯವಾಗಿವೆ.

	ಬುದ್ಧವಂಸದಲ್ಲಿ ಗೌತಮ ಬುದ್ಧನ ಮೊದಲು ಆಗಿಹೋದ 24 ಬುದ್ಧರ ಜೀವನಚರಿತೆಯನ್ನು ಕುರಿತು ಹೇಳುವ ಪುರಾಣಗಳಿವೆ.

	ಕೊನೆಯದಾದ ಚರಿಯಾಪಿಟಕದಲ್ಲಿ 35 ಜಾತಕಗಳಿದ್ದು, ಅವು ಪದ್ಯಮಯವಾಗಿವೆ.

	ಅಭಿದಮ್ಮ ಪಿಟಕ : ಉಚ್ಚಧರ್ಮದ ಸೂಕ್ಷ್ಮ ಅಂಶಗಳನ್ನು ಇದರಲ್ಲಿ ವರ್ಣಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಏಳು ಭಾಗಗಳಿವೆ. 1 ಧಮ್ಮಸಂಗಣಿ, 2 ವಿಭಂಗ, 3 ಧಾತುಕಥಾ, 4 ಪುಗ್ಗಲಪಞ್ಞತ್ತಿ, 5 ಕಥಾವತ್ಥು, 6 ಯಮಕ, 7 ಪಟ್ಠಾನ ಪಕರಣ. ಈ ಭಾಗಗಳಲ್ಲಿ ವಿವಿಧ ಧರ್ಮಗಳ ವ್ಯಾಖ್ಯೆ ಮತ್ತು ವರ್ಗೀಕರಣ, ಮೂಲ ದ್ರವ್ಯಗಳು. ಮಾನವರ ವರ್ಣನೆ, ಪ್ರವಚನ ವಿಷಯಗಳು, ವ್ಯಂಗ್ಯಾರ್ಥವುಳ್ಳ ಪ್ರಶ್ನೆಗಳು ಮತ್ತು ನ್ಯಾಯ-ಮೊದಲಾದವುಗಳ ವಿಸ್ತಾರವಾದ ವಿವರಣೆಗಳಿವೆ. ಬುದ್ಧನ ಜೀವನ ಹಾಗೂ ಉಪದೇಶಗಳನ್ನು ತಿಳಿಯಬಯಸುವವರಿಗೆ ವಿನಯ ಹಾಗೂ ಸುತ್ತ ಪಿಟಕಗಳು ಮುಖ್ಯ : ಅಭಿಧಮ್ಮ ಪಿಟಕವಲ್ಲ. ಮೊದಲ ಎರಡು ಪಿಟಕಗಳಲ್ಲಿ ನಾನಾ ಪರ್ಯಾಯಗಳಿಂದ ಸ್ವಾರಸ್ಯವಾಗಿ ತಿಳಿಸಿರುವ ಧರ್ಮವನ್ನೇ ಮೂರನೆಯದರಲ್ಲಿ ಬೇರೊಂದು ರೀತಿಯಲ್ಲಿ ನೀರಸವಾಗಿ ಪಟ್ಟಿ ಮಾಡಿದೆ.

	ಹೀಗೆ ತ್ರಿಪಿಟಕಗಳು ಬೌದ್ಧಧರ್ಮದ ಸಾರವನ್ನು ತಿಳಿಸುವ ಧರ್ಮಗ್ರಂಥಗಳ ಸಂಗ್ರಹಗಳಾಗಿವೆ. ಇವೆಲ್ಲ ಪಾಲೀ ಭಾಷೆಯಲ್ಲಿವೆ. ಭಾಷಿಕ ಲಕ್ಷಣಗಳನ್ನು ಅವಲೋಕಿಸಿದರೆ, ತ್ರಿಪಿಟಕಕ್ಕೆ ಸೇರುವ ಗ್ರಂಥಗಳಲ್ಲಿ ಕೆಲವು ಪ್ರಾಚೀನ ಮಾಗಧೀ ಭಾಷೆಯಲ್ಲಿವೆ ಎಂಬ ಮಾತು ಸ್ಪಷ್ಟವಾಗುತ್ತದೆ. ಈ ಪ್ರಾಚೀನ ಮಾಗಧಿಯೇ ಕಾಲಾಂತರದಲ್ಲಿ ಪಾಲೀ ಎಂಬ ಹೆಸರಿನಲ್ಲಿ ಸಾಹಿತ್ಯಿಕ ಭಾಷೆಯಾಗಿ ಪರಿವರ್ತನೆ ಹೊಂದಿತು. ಸಿಂಹಳದ ಬೌದ್ಧರು ತಮ್ಮ ಆಗಮದ ಭಾಷೆಯನ್ನು ಮಾಗಧೀ ಎಂದು ಕರೆದರೂ ಪಾಲೀಗೂ ಇದಕ್ಕೂ ಭಾಷಿಕ ಭೇದಗಳು ಕಂಡುಬರುತ್ತವೆ. ಆದರೆ ಬೌದ್ಧಸಂಪ್ರದಾಯ ಮಾಗಧೀ ಮತ್ತು ಪಾಲೀ ಭಾಷೆಗಳು ಒಂದೇ ಎಂದು ಪರಿಗಣಿಸುತ್ತದೆ.											(ಪಿ.ಬಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ